ದಾಮೋದರ್ ಶ್ರೇಣಿ -
 	ತಾಲ್‍ಚಿರ್ ಶಿಲಾ ಶ್ರೇಣಿಯ ಮೇಲಿರುವ ಶಿಲಾಶ್ರೇಣಿ; ದಾಮುದಾ ಶ್ರೇಣಿ ಪರ್ಯಾಯನಾಮ. ಇದರ ಶಿಲಾಪ್ರಸ್ತರಗಳನ್ನು ಮೊತ್ತಮೊದಲು ದಾಮೋದರ ನದಿಯ ಕಣಿವೆಯಲ್ಲಿ ಗುರುತಿಸಿದ ಕಾರಣ ಈ ಹೆಸರು ಬಂದಿದೆ. ಗೊಂಡ್ವಾನ ಶ್ರೇಣಿಯಲ್ಲಿ ಇದು ಬಲು ಮುಖ್ಯವಾದ ವರ್ಗ, ಭಾರತದ ಕಲ್ಲಿದ್ದಲ ಮುಖ್ಯ ಗಣಿಗಳೆಲ್ಲವೂ ಇದಕ್ಕೆ ಸೇರಿವೆ. ರಾಣಿಗಂಜ್ ಪ್ರದೇಶದಲ್ಲಿ ಇದು 2032.33ಮೀಗಳಷ್ಟೂ ಝರಿಯಾ ಪ್ರದೇಶದಲ್ಲಿ 1789.66ಮೀ.ಗಳಷ್ಟೂ ಮಂದವಾಗಿದೆ. ಗಣಿಗಳಿಂದ ಪಶ್ಚಿಮಕ್ಕೆ ಸರಿದಂತೆಲ್ಲ ಈ ಮಂದ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಉದಾಹರಣೆಗೆ ಬೊಕಾರೋ ಮತ್ತು ಕರನ್‍ಪುರ ಕಲ್ಲಿದ್ದಲ ಗಣಿಪ್ರದೇಶದಲ್ಲಿ ಶ್ರೇಣಿಯ ಮಂದ ಕುಗ್ಗಿ ರಾಣಿಗಂಜ್ ಮತ್ತು ಝರಿಯಾಗಳಲ್ಲಿ ಕಂಡುಬಂದ ಮಂದದಲ್ಲಿ ಅರ್ಧದಷ್ಟಾಗುವುದು. ದಾಮೋದರ ಶ್ರೇಣಿಯಲ್ಲಿ ಸಾಮಾನ್ಯವಾಗಿ ಸಿಹಿ (ನದಿ) ನೀರಿನಲ್ಲಿ ಶೇಖರವಾಗುವ ನಾನಾ ಬಗೆಯ ಶಿಲೆಗಳನ್ನು ಕಾಣಬಹುದು. ದಪ್ಪನೆಯ ಗುಂಡು ಕಣಗಳಿಂದ ಕೂಡಿದ ಮರಳುಶಿಲೆ, ಜೇಡುಶಿಲೆ, ಕಲ್ಲಿದ್ದಲ ಪ್ರಸ್ತರಗಳು ಮತ್ತು ಕಬ್ಬಿಣ ಸೇರಿರುವ ಶಿಲಾಪ್ರಸ್ತರಗಳನ್ನು ಗುರುತಿಸಬಹುದು. ಇವುಗಳಲ್ಲೆಲ್ಲ ಕಲ್ಲಿದ್ದಲ ಪ್ರಸ್ತರಗಳು ಬಲು ವಿಶಿಷ್ಟವಾಗಿ ಕಂಡುಬರುತ್ತವೆ. ಹಲವು ಪ್ರದೇಶಗಳಲ್ಲಿ ಇವನ್ನು ಒಂದೇಸಮ ಯಾವ ಅಡಚಣೆಯೂ ಇಲ್ಲದೆ ಸುಮಾರು 20 ಮೈಲಿ ದೂರದ ವರೆಗೆ ಗುರುತಿಸಬಹುದು. ಈ ಶಿಲೆಗಳಲ್ಲಿ ಹರಿಯುವ ನೀರಿನ ಪ್ರಭಾವದಿಂದ ಉಂಟಾಗುವ ವಿಂಗಡಣಾ ಪ್ರಸ್ತರೀ ರಚನೆಯನ್ನು (ಗ್ರೇಡೆಡ್ ಬೆಡ್ಡಿಂಗ್) ಸುಲಭವಾಗಿ ಗುರುತಿಸಬಹುದು. ಅಲ್ಲದೆ ಈ ಶಿಲಾಸಮುದಾಯದ ವಿನ್ಯಾಸವನ್ನು ಅನುಸರಿಸಿ ಇವು ಸಾಮಾನ್ಯವಾಗಿ ದೊಡ್ಡ ನದೀಪಾತ್ರಗಳಲ್ಲೊ ದೊಡ್ಡ ಸಿಹಿ ನೀರಿನ ಸರೋವರಗಳಲ್ಲೊ ಶೇಖರವಾದವೆಂದು ಊಹಿಸಬಹುದು. ಅನೇಕ ಸ್ಥಳಗಳಲ್ಲಿ ಈ ಬಗೆಯ ಶೇಖರಣೆಯ ವಿವಿಧ ಹಂತಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿದೆ.

ದಾಮೋದರ ಶಿಲಾಶ್ರೇಣಿಯನ್ನು ಮೂರು ಮುಖ್ಯ ಹಂತಗಳಾಗಿ ವಿಭಜಿಸಲಾಗಿದೆ: ಬಾರಕರ್ ಸ್ತೋಮ (ಹಂತ), ಕಬ್ಬಿಣ ಜೇಡುಶಿಲಾಹಂತ ಮತ್ತು ರಾಣಿಗಂಜ್ ಹಂತ. ಇವನ್ನು ರಾಣಿಗಂಜ್ ಮತ್ತು ಝರಿಯಾ ಕಲ್ಲಿದ್ದಲ ಗಣಿ ಪ್ರದೇಶಗಳಲ್ಲಿ ಈ ಕೆಳಗೆ ಕಾಣಿಸಿದಂತೆ ಮತ್ತೆ ವಿಭಜಿಸಲಾಗಿದೆ : 
				ರಾಣಿಗಂಜ್    		  	ಝರಿಯಾ
			5 ಕುಮಾರ್‍ಪುರ ಮರಳು ಶಿಲೆ	  	ಲೋಹಿಸಿತಿ ಮರಳುಶಿಲೆ
			4 ನಿಟೂರಿಯಾ ಕಲ್ಲಿದ್ದಲ ಪ್ರಸ್ತರಗಳು   	ತೆಲ್‍ಮುಚ ಕಲ್ಲಿದ್ದಲು ಪ್ರಸ್ತರಗಳು     
 3 ರಾಣಿಗಂಜ್‍ಹಂತ							
			3 ಹಿಜೂಲಿ ಮರಳುಶಿಲೆ	     		ಜಾಂದಿಹ ಮರಳುಶಿಲೆ
			2 ಸೀತಾರಾಂಪುರ ಕಲ್ಲಿದ್ದಲ ಪ್ರಸ್ತರಗಳು  	ಮುರುಳಿಧಿ ಕಲ್ಲದ್ದಲ ಪ್ರಸ್ತರಗಳು
1 ಎಥೋರ ಮರಳುಶಿಲೆ		  	ಮಾಹುದ ಮರಳುಶಿಲೆ
		
			3 ಕುಲ್ತಿ ಕಬ್ಬಿಣಯುಕ್ತ ಜೇಡುಶಿಲೆ	  	ಹರಿಹರ್‍ಪುರ ಇಂಗಾಲ ಯುಕ್ತ ಜೇಡುಶಿಲೆ
2 ಕಬ್ಬಿಣಯುಕ್ತ						
ಜೇಡುಶಿಲೆಯಹಂತ	       2 ಬೆಗುನಿಯಾ ಮರಳು ಶಿಲೆ	  	ಪೇಟಿಯ ಮರಳುಶಿಲೆ
			1 ಬೆಗುನಿಯಾ ಜೇಡುಶಿಲೆ		  	ಷಿಬ್ಬಾಬುದೀಖ್ ಜೇಡು ಶಿಲೆ

			3 ಬೆಗುನಿಯಾ ಕಲ್ಲಿದ್ದಲ ಪ್ರಸ್ತರ	  	ಜೋರಾಪೋಕಾರ್ 
							  	ಕಲ್ಲಿದ್ದಲ ಪ್ರಸ್ತರ
1 ಬಾರ್‍ಕರ್ ಹಂತ	2 ಲೈಕ್‍ಧಿ ಕಲ್ಲಿದ್ದಲ ಪ್ರಸ್ತರ		  	ಜಾಗ್ತಾ ಕಲ್ಲಿದ್ದಲ ಪ್ರಸ್ತರ
			1 ದಮ್‍ಗಾರಿಯ ಕಲ್ಲಿದ್ದಲ ಪ್ರಸ್ತರ	  	ನರ್ದ್‍ಕರ್ಕಿ ಕಲ್ಲಿದ್ದಲ ಪ್ರಸ್ತರ	
						
ಈ ಶ್ರೇಣಿಯಲ್ಲಿನ ಕಲ್ಲಿದ್ದಲು ಪ್ರಸ್ತರಗಳನ್ನು ಮುಖ್ಯವಾಗಿ ಪರಿಗಣಿಸಬೇಕು. ಇವುಗಳಿಗೆ ವಿಶೇಷ ರೀತಿಯ ಪದರು ರಚನೆ ಉಂಟು. ಹೊಳೆಯುತ್ತರುವ ವಿಟ್ರೇನ್ ಮತ್ತು ಹೊಳಪಿಲ್ಲದ ಡ್ಯೂರೇನ್ ಪದರಗಳು ಒಂದಾದ ಮೇಲೊಂದು ಅನುಕ್ರಮವಾಗಿ ಕಂಡುಬರುವುದೇ ಇದರ ಮುಖ್ಯ ಕಾರಣ. ವಿಟ್ರೇನ್ ಗೊಂಡ್ವಾನ ಯುಗದ ಮರಗಳ ತೊಗಟೆಯಿಂದ ಉಂಟಾದುದು. ಸಾಮಾನ್ಯವಾಗಿ ಇದರ ಪದರುಗಳು ಮಸೂರದ ಆಕಾರವಾಗಿದ್ದು ಕೆಲವು ಅಂಗುಲಗಳಿಂದ ಹಿಡಿದು ಹಲವಾರು ಅಡಿಗಳ ವರೆಗೆ ಹರಡಿರುತ್ತವೆ. ಡ್ಯೂರೇನ್ ಇಂಗಾಲಯುಕ್ತ ವಸ್ತು ಮತ್ತು ಜೇಡು ಮಣ್ಣಿನ ಸಂಯೋಗದಿಂದಾದುದು. ಕ್ರಮೇಣ ಇದು ಇಂಗಾಲಯುಕ್ತ ಜೇಡುಶಿಲೆಯಲ್ಲಿ ಪರ್ಯವಸಾನವಾಗುವುದೂ ಉಂಟು. ಇವೇ ಅಲ್ಲದೆ ಮರದ ಕಾಂಡಭಾಗದಿಂದ ಉಂಟಾದ ಫ್ಯೂಸೇನ್ ಕೆಳಗೊಂಡ್ವಾನ ಕಲ್ಲಿದ್ದಲಿನ ಶ್ರೇಣಿಗಳಲ್ಲಿ ಬಹುತೇಕ ಕಂಡುಬರುತ್ತದೆ.

  ಈ ಶಿಲೆಗಳಲ್ಲಿ ಮುಖ್ಯವಾಗಿ ಪೇಲಿಯೊಜೋಯಿಕ್ ಪ್ರಾಗ್ಜೀವಿಕಲ್ಪ ಗ್ಲಾಸಾಪ್ಟೆರಿಸ್, ಸ್ಟೀನೋಫಿಲ್ಲಮ್ ಕಾರ್ಡೈಟಿಸ್, ಗಂಗಾಮಾಪ್ಟೆರಿಸ್ ಮುಂತಾದ ಸಸ್ಯಾವಶೇಷಗಳಿವೆ. ಇದು ತನಕ ಯಾವ ಬಗೆಯ ಪ್ರಾಣಿಗಳ ಅವಶೇಷಗಳು ಕಂಡುಬಂದಿಲ್ಲ. ಇದಕ್ಕೆ ಭೂವಿಜ್ಞಾನಿಗಳಿಂದ ಸಮರ್ಪಕ ಸ್ಪಷ್ಟನೆಯೂ ದೊರೆತಿಲ್ಲ. ಫಾಕ್ಸ್ ಅವರ ಅಭಿಪ್ರಾಯದಂತೆ ಗೊಂಡ್ವಾನದ ಈ ಗೊಂಡಾರಣ್ಯ ಪ್ರಾಣಿಗಳ ವಾಸಕ್ಕೆ ದುರ್ಭರವಾಗಿತ್ತೋ ಏನೋ? ಕಲ್ಲಿದ್ದಲಿಗೆ ಮೂಲಭೂತವಾದ ಸಸ್ಯಾವಶೇಷಗಳನ್ನು ಅಸಂಖ್ಯಾತ ನದಿಗಳು ಹೊರಪ್ರಾಂತಗಳಿಂದ ಒಯ್ದು ಇಲ್ಲಿಯ ಕಮರಿಗಳಲ್ಲಿ ಶೇಖರಿಸಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಭಾರತದ ಮುಖ್ಯ ಕಲ್ಲಿದ್ದಲಿನ ಗಣಿಗಳೆಲ್ಲ ಈ ಶಿಲಾಶ್ರೇಣಿಯಲ್ಲಿ ಕಂಡುಬಂದಿವೆ. ಮೊತ್ತ ಮೊದಲ ಕಲ್ಲಿದ್ದಲ ಗಣಿ 1774ರಲ್ಲಿ ವಾರ್ನ್ ಹೇಸ್ಟಿಂಗ್ಸ್ ಈಸ್ಟ್ ಇಂಡಿಯಾ ಕಂಪನಿಯ ಗೌರ್ನರಾಗಿದ್ದಾಗ ರಾಣಿಗಂಜಿನಲ್ಲಿ ಪ್ರಾರಂಭವಾಯಿತು. 							(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ